ಕಟ್ಟಿಟ್ಟ ಬುತ್ತಿ, ರಾಜಕೀಯ ಜಗ-ಜಟ್ಟಿ..!
ಕಟ್ಟಿಟ್ಟ ಬುತ್ತಿ ಲೆಕ್ಕ ಕೇಳಲು ಕೋಟಿ ಕೋಟಿ, ಸಾಮಾನ್ಯವೇ... ಹೊಡೆದ ಲೂಟಿ. ಬಂದು ಕಾಲಡಿ ಬೀಳಲು ಬೇಕಾಬಿಟ್ಟಿ, ಸಾಕು... ಮೆರೆಯಲು ಅವರಿವರ ಎತ್ತಿ-ಕಟ್ಟಿ. ಆಗಿರುವಾಗ ಆತ... ಹೊಗಳು ಭಟ್ಟರಿಗೆ ರಾಜಕೀಯ ಜಗ-ಜಟ್ಟಿ..! ಮೀಸೆ ಮಣ್ಣಾಗದ ಜಗಜಟ್ಟಿ..! ಅಂತ್ಯ ನೆನಪಾಗಲು.. ಭಾಷಣದ ಭರಾಟೆ ಬಿತ್ತಿ, ಸೋತಾಗ ನಿಂತು ಕೈ ಕಟ್ಟಿ..! ಸೋಲುವವರ ಗೆಲ್ಲಿಸಿ- ಗೆಲ್ಲುವವರ ಸೋಲಿಸಿ ಮೆರೆದಾಗ ಪಂಥ ಕಟ್ಟಿ, ಎಸೆದಿರಲು ಮೂಲೆಗೆ... "ಭರವಸೆ"ಯ ಮೂಟೆ ಕಟ್ಟಿ..! ಮೀಸೆ ಮಣ್ಣಾಗದ ಜಗಜಟ್ಟಿ..! ಸ್ಥಾನ ಸಿಗದಾಗ ಗುಂಪುಗಟ್ಟಿ, ಪಕ್ಷ ಪುಡಿಗಟ್ಟಿ, ನಿಷ್ಠರೆನ್ನಿಸಿಕೊಳ್ಳುವರ ಹೆಡೆ ತಟ್ಟಿ, ಹೊರಟಾಗ ಅಂದುಕೊಳ್ಳಲು ನಾನಿನ್ನೂ ಜಗಜಟ್ಟಿ..! ಮೀಸೆ ಮಣ್ಣಾಗದ ಜಗಜಟ್ಟಿ..! ಕೊಳಗೇರಿ ಕುಲವೆತ್ತಿ, ಕೊಳೆತ ರಾಕ್ಷಸ ಬೀಜ ಬಿತ್ತಿ, ಫಸಲು ತೆಗೆಯಲು ತೋಳೆತ್ತಿ, ಘರ್ಜಿಸಿದರೆ ಬಂದೀತೇ... ನೀ ಬಿತ್ತದ... ಬೆಳೆ ತೆಗೆಯಲು ತಲೆಯೆತ್ತಿ..! ಮೀಸೆ ಮಣ್ಣಾಗದ ಜಗಜಟ್ಟಿ..! ಸೋತರೂ... ಅದಿಕಾರದ ಕುರ್ಚಿ ಹತ್ತಿ..! ನಡೆಸಲಾಗದೆ.. ಪ್ರಜಾ ತತ್ವ ಮೇಲೆತ್ತಿ..! ಗೊತ್ತಿದ್ದೂ... ಅಂತ್ಯ ಕಟ್ಟಿಟ್ಟ ಬುತ್ತಿ, ಅಹಂಕಾರದಿ ಮೆರೆವ ಜಗಜಟ್ಟಿ..! ಮೀಸೆ ಮಣ್ಣಾಗದ ಜಗಜಟ್ಟಿ..! ಸೋತರೂ ಮೀಸೆ ಮಣ್ಣಾಗದ ಜಗಜಟ್ಟಿ..! ಗೊತ್ತಿದ್ದೂ... ಅಂತ್ಯ ಕಟ್ಟಿಟ್ಟ ಬುತ್ತಿ
Comments