Posts

Showing posts from December, 2008

ನಾಡಿ ಮಿಡಿದವಳು

ಕೇಳಿದ್ದಳು ಕೆನ್ನೆ ಸವರಿ ಬೆಣ್ಣೆ ಪೆನ್ಸಿಲ್ಲು, ಹಿಡಿದಿದ್ದಳು ತೊಂಡೆಸೊಪ್ಪು ತಿಕ್ಕಿದ್ದ ಬರಹದ ಕಲ್ಲು, ಬಿಕ್ಕಿದ್ದಳು ಬೇಡವೆಂದರೇಕೆ ತಂದಿಟ್ಟೆ ಈಚಲು ಕೋಲು? ತಡವರಿಸಿದ್ದಳು ತಪ್ಪಿಲ್ಲದೆ ಉಕ್ತಲೇಖನ ಬರೆಯಲು, ಕಾದಿದ್ದಳು ಕೋಪದಿ ಶಾಲೆಯಿಂದೊರಬರಲು, ನೋಯಿಸಿದ್ದಳು ಮನದಿ ಮೌನ ಮರೆಯಾಗಲು, ಏಕೆಂದರೆ ಅವಳು ನನ್ನವಳು,ಹೃದಯದ ನಾಡಿ ಮಿಡಿದವಳು.

ಯಾರವಳು?

ಮಾಗಿಯ ಚಳಿಗೆ ಮಂಜಿನ ಮುಸುಕೆಳೆದು ಮನದ ಮಾತಿಗೆ ಸಿಗದೆ ಹೋದವಳ್ಯಾರು? ಚಿಗುರೊಡೆದ ಪ್ರೀತಿಗೆ ಆಸೆಯ ಕುಡಿಯಾಗಿ ಹೃದಯಕೆ ಸ್ಪಂದಿಸದವಳ್ಯಾರು? ಬೆಚ್ಚಗಿನ ಗೂಡಾಗಿ, ಮುತ್ತಿನ ಮಳೆಗರೆದು ನಡುಕ ನಿಲ್ಲಿಸದೆ ಹೋದವಳ್ಯಾರು? ಹೊದ್ದು ಮಲಗಿದ್ದ ಮುದ್ದು ಗುಮ್ಮನ ಬೆಚ್ಚಿಬೀಳಿಸಿ ನಿದ್ರೆ ಕದ್ದವಳ್ಯಾರು? ಇದನರಿತೂ, ಕಾರಣ ನಾನಲ್ಲವೆಂದು ಮುಗುಳ್ನಕ್ಕ ಮಿಂಚುಳ್ಳಿ ನೀನ್ಯಾರು...!?